ಫಿನಾಲ್
C6H5OH. ಕಾರ್ಬಾಲಿಕ್ ಅಮ್ಲ ಎಂಬ ಹೆಸರಿನ ಸಂಯುಕ್ತ. ಆರೋಮ್ಯಾಟಿಕ್ ಹೈಡ್ರೊಕಾರ್ಬನ್ ಆದ ಬೆನ್‍ಜೀನಿನಲ್ಲಿರುವ ಹೈಡ್ರೊಜನ್ನಿನ ಪರಮಾಣುವನ್ನು ಹೈಡ್ರಾಕ್ಸಿಲ್ ರ್ಯಾಡಿಕಲಿನಿಂದ ಪಲ್ಲಟಿಸಿದರೆ ಫಿನಾಲ್ ಉಂಟಾಗುವುದು. ಇದನ್ನು 1834ರಲ್ಲಿ ರುಂಗೆ ಎಂಬಾತ ಶೋಧಿಸಿದ. 170ºಅ ಮತ್ತು 230ºಅ ಉಷ್ಣತೆಗಳ ಅಂತರದಲ್ಲಿ ಕುದಿಯುವ ಕೋಲ್ಟಾರ್ ಎಣ್ಣೆಯ ಅಂಶದಲ್ಲಿ ಇದು ಇರುವುದು. ಈ ಭಿನ್ನಾಂಶ ದ್ರವಕ್ಕೆ ಸೋಡಿಯಮ್ ಹೈಡ್ರಾಕ್ಸೈಡ್ ದ್ರಾವಣ ಮಿಶ್ರಮಾಡಿ ಕಲಕಿದರೆ ಅದರಲ್ಲಿದ್ದ ಫಿನಾಲ್ ಕರಗಿ ಸೋಡಿಯಂ ಫಿನೇಟ್ ಉಂಟಾಗುವುದು. ಇದರ ಮೂಲಕ ಇಂಗಾಲದ ಡೈ ಆಕ್ಸೈಡನ್ನು ಹಾಯಿಸಿದಾಗ ಫಿನಾಲ್ ಬಿಡುಗಡೆ ಆಗುತ್ತದೆ. ಅಶುದ್ಧ ಫಿನಾಲನ್ನು ಬಟ್ಟಿ ಇಳಿಸಿದಾಗ ಶುದ್ಧ ಫಿನಾಲ್ 182ºಅ ಉಷ್ಣತೆಯಲ್ಲಿ ಕುದಿದು ಬೇರ್ಪಡುವುದು. ಡೈಫಿನೈಲ್ ಆಕ್ಸೈಡಿನ ಸಂಪರ್ಕದಲ್ಲಿ ಹೆಚ್ಚು ಉಷ್ಣತೆ ಮತ್ತು ಒತ್ತಡಗಳಲ್ಲಿ ಕ್ಲೋರೊಬೆನ್‍ಜೀನ್ ಸೋಡಿಯಮ್ ಹೈಡ್ರಾಕ್ಸೈಡಿನೊಡನೆ ವರ್ತಿಸಿ ಫಿನಾಲ್ ಉತ್ಪತ್ತಿ ಆಗುವುದು. ಮಿಡಲ್ ಆಯಿಲ್ ಭಿನ್ನಾಂಶ ದ್ರವದಲ್ಲಿ ನ್ಯಾಫ್ತಲೀನನ್ನು ಸ್ಛಟಿಕೀಕರಿಸಿ ಉಳಿದ ದ್ರಾವಣದಲ್ಲಿ ಸೋಡಿಯಮ್ ಹೈಡ್ರಾಕ್ಸೈಡ್ ದ್ರಾವಣ ಬಳಸಿ ಫಿನಾಲನ್ನು ಪಡೆಯುತ್ತಾರೆ.

ಆಗತಾನೆ ಬಟ್ಟಿ ಇಳಿಸಿದ ಫಿನಾಲ್ ಬಣ್ಣರಹಿತವಾಗಿರುವುದು. 43ºಅ ಉಷ್ಣತೆಯಲ್ಲಿ ದ್ರವಿಸುವುದು 182ºಅ ಉಷúತೆಯಲ್ಲಿ ಕುದಿಯುವುದು. ಇದು ವಿಷ ಮತ್ತು ದಹನಶೀಲ ವಸ್ತು. ಚರ್ಮಕ್ಕೆ ತಗುಲಿದರೆ ಸುಡುವುದು. ಫಿನಾಲಿನಲ್ಲಿ ಸ್ವಲ್ಪ ನೀರಿದ್ದರೆ ಅದರ ಕುದಿಬಿಂದು ಕಡಿಮೆಯಾಗುವುದು. 68.3ºಅ ಸಂದಿಸ್ಥ ಉಷ್ಣತೆಯಲ್ಲಿ ಫಿನಾಲ್ ನೀರಿನೊಡನೆ ಎಲ್ಲ ಪ್ರಮಾಣಗಳಲ್ಲಿಯೂ ವಿಲೀನವಾಗುವುದು. ತಂಪಿಸಿದರೆ ಇವು ಬೇರ್ಪಡುತ್ತವೆ. ಆಲ್ಕೊಹಾಲ್, ಗ್ಲಿಸರೀನ್ ಕ್ಲೋರೊಫಾರಮ್ ಮತ್ತು ಈಥರ್ ಇವುಗಳಲ್ಲಿ ಎಲ್ಲ ಪ್ರಮಾಣಗಳಲ್ಲಿಯೂ ವಿಲೀನವಾಗುವುದು. ಇದನ್ನು ವಾತಾವರಣದಲ್ಲಿಟ್ಟರೆ ಕ್ರಮೇಣ ಕೆಂಪು ಬಣ್ಣ ತಳೆಯುವುದು. ಹೈಡ್ರಾಕ್ಸಿಲ್ ಗುಂಪನ್ನು ಅಪರ್ಯಾಪ್ತ ಇಂಗಾಲದ ಪರಮಾಣುವಿಗೆ ಲಗತ್ತಿಸಿರುವುದರಿಂದ ಅಥವಾ ಎನಾಲಿಕ್ ಭಾಗ ಇರುವುದರಿಂದ ಅಮ್ಲೀಯ ಗುಣ ಎದ್ದು ಕಾಣುವುದು. ಆಗ್ರ್ಯಾನಿಕ್ ಅಮ್ಲಗಳು ಸೋಡಿಯಮ್ ಬೈಕಾರ್ಬನೇಟ್ ದ್ರಾವಣದಲ್ಲಿ ಲೀನವಾಗುತ್ತವೆ. ಆದರೆ ಫಿನಾಲ್ ಸೋಡಿಯಮ್ ಬೈಕಾರ್ಬನೇಟ್ ದ್ರಾವಣದಲ್ಲಿ ಲೀನವಾಗುವುದಿಲ್ಲ. ಈ ವ್ಯತ್ಯಾಸದಿಂದ ಫಿನಾಲ್ ಮತ್ತು ಅಗ್ರ್ಯಾನಿಕ್ ಅಮ್ಲಗಳನ್ನು ಗುರುತಿಸಬಹುದು. ಸತುವಿನ ಪುಡಿಯೊಡನೆ ಬಟ್ಟಿ ಇಳಿಸಿದಾಗ ಬೆನ್‍ಜೀನ್ ಮತ್ತು ಸತುವಿನ ಆಕ್ಸೈಡ್ ಉಂಟಾಗುತ್ತವೆ. ಬೆನ್‍ಜೀನ್ ಆವಿಯಾಗಿ ಬೇರೊಂದು ಪಾತ್ರೆಯಲ್ಲಿ ಶೇಖರವಾಗುತ್ತದೆ. ಬ್ರೋಮೀನ್ ದ್ರಾವಣವನ್ನು ಫಿನಾಲ್ ದ್ರಾವಣಕ್ಕೆ ಹಾಕಿದಾಗ ಬ್ರೋಮೀನ್ ತನ್ನ ಬಣ್ಣ ಕಳೆದುಕೊಂಡು ಬಿಳಿ ಒತ್ತರವುಳ್ಳ ಟ್ರೈಬ್ರೋಮೊ ಫಿನಾಲ್ ಉಂಟಾಗುವುದು. ನೈಟ್ರಿಕ್ ಆಮ್ಲ ಫಿನಾಲಿನೊಡನೆ ವರ್ತಿಸಿದಾಗ ಆಸ್ಛೋಟಕ ವಸ್ತುವಾದ ಪಿಕ್ರಿಕ್ ಆಮ್ಲ (2, 4, 6-ಟೈ ನೈಟ್ರೊಫಿನಾಲ್) ತೃಪ್ತಿಕರವಾಗಿ ಉಂಟಾಗದು. ಕಾರಣ ಫೀನಾಲ್ ಉತ್ಕರ್ಷಣಕ್ಕೆ ಅಸ್ಥಿರ ನೈಟ್ರೇಷನ್ ಆಗುವುದಕ್ಕೆ ಬದಲು ಫಿನಾಲ್ ನಾಶಹೊಂದುವುದು. ಫಿನಾಲಿನಿಂದ 2, 4-ಫಿನಾಲ್ ಡೈಸಲ್ಛೋಕ್ ಆಮ್ಲವನ್ನು ತಯಾರಿಸಿ ನೈಟ್ರಿಕ್ ಆಮ್ಲದೊಡನೆ ವರ್ತಿಸುವಂತೆ ಮಾಡಿದಾಗ ಸುಲಭವಾಗಿ ವರ್ತಿಸಿ ಪಿಕ್ರಿಕ್ ಆಮ್ಲ ಬರುವುದು. ಅಪರ್ಯಾಪ್ತದ ಸಲ್ಛೋನಿಕ್ ಆಮ್ಲದ ರ್ಯಾಡಿಕಲ್ ಫಿನಾಲನ್ನು ಭದ್ರಪಡಿಸಿ ನೈಟ್ರಿಕ್ ಆಮ್ಲ ಉತ್ಕರ್ಷಣದ ವ್ಯತಿರಿಕ್ತವಾಗಿ ರಕ್ಷಣೆ ನೀಡುವುದು.

	ಮೊದಲನೆಯ ಮಹಾಯುದ್ಧದ ವೇಳೆಯಲ್ಲಿ ಪಿಕ್ರಿಕ್ ಆಮ್ಲವನ್ನು ತಯಾರಿಸಲು, ಬೆನ್‍ಜೀನನ್ನು ಬೆನ್‍ಜೀನ್ ಸಲ್ಛೋನಿಕ್ ಆಮ್ಲವಾಗಿ ಪರಿವರ್ತಿಸಿ ಇದನ್ನು ಸೋಡಿಯಮ್ ಹೈಡ್ರಾಕ್ಸೈಡಿನೊಡನೆ ಮಿಶ್ರ ಮಾಡಿ ಚೆನ್ನಾಗಿ ಕಾಸಿ, ಅಮೇಲೆ ಇಂಗಾಲದ ಡೈ ಆಕ್ಸೈಡನ್ನು ಹಾಯಿಸಿ ಫಿನಾಲನ್ನು ತಯಾರಿಸಿ ಉಪಯೋಗಿಸುತ್ತಿದ್ದರು. ಸಾಮಾನ್ಯ ಉಷ್ಣತೆಯಲ್ಲಿ 20% ನೈಟ್ರಿಕ್ ಆಮ್ಲ ಸುಲಭವಾಗಿ ಫಿನಾಲಿನೊಡನೆ ವರ್ತಿಸಿ ಅರ್ಥೊನೈಟ್ರೊಫಿನಾಲ್ (30-40%) ಮತ್ತು ಪ್ಯಾರ ನೈಟ್ರೊಫಿನಾಲ್ ಇವುಗಳ ಮಿಶ್ರಣವನ್ನು ಕೊಡುತ್ತದೆ. ಫಿನಾಲ್, ಒಂದು ಸಣ್ಣ ಹರಳು, ಸೋಡಿಯಮ್ ನೈಟ್ರೈಟ್ (ಓಚಿಓo2), ಐದುತೊಟ್ಟು, ಸಾರಗಂಧಕಾಮ್ಲ ಇವನ್ನು ಬೆಚ್ಚಗೆ ಮಾಡಿದಾಗ ನೀಲಿಬಣ್ಣ ಕಾಣುತ್ತದೆ. ತಂಪು ಮಾಡಿದಾಗ ಕಂದುಬಣ್ಣಕ್ಕೆ ತಿರುಗುತ್ತದೆ. ಈ ಮಿಶ್ರಣವನ್ನು ನೀರಿನಲ್ಲಿ ಸುರಿದಾಗ ಕೆಂಪು ಬಣ್ಣ ಬರುತ್ತದೆ. ಇದು ಸೋಡಿಯಮ್ ಹೈಡ್ರಾಕ್ಸೈಡ್ ದ್ರಾವಣದಲ್ಲಿ ನೀಲಿ ಬಣ್ಣವನ್ನು ಪಡೆದಿರುತ್ತದೆ. ಈ ಕ್ರಿಯೆಗೆ ಲೈಬರ್‍ಮನ್ ರಾಸಾಯನಿಕ ಕ್ರಿಯೆ ಎಂದು ಹೆಸರು. 

ಚಿತ್ರ-1

ಇದರಿಂದ ಫಿನಾಲನ್ನು ಗುರುತಿಸುವರು. ಒಂದು ತೊಟ್ಟು ಫೆರಿಕ್ ಕ್ಲೋರೈಡ್ ದ್ರಾವಣವನ್ನು ಫಿನಾಲ್ ದ್ರಾವಣಕ್ಕೆ ಹಾಕಿದಾಗ ಊದಾ ಬಣ್ಣ ಬರುತ್ತದೆ. ಇದು ಕೂಡ ಫಿನಾಲನ್ನು ಗುರುತಿಸುವುದಕ್ಕೆ ಅನುಕೂಲ.

	ಟೈರೋಸಿನ್ ಎಂಬ ಅಮೈನೋ ಆಮ್ಲ ವಿಭಜನೆ ಹೊಂದಿ ಕೋಶಗಳಲ್ಲಿ ಆಗುವ ಕ್ರಿಯೆಗಳ ಅಂತಿಮ ವಸ್ತುವಾಗಿ ಫಿನಾಲ್, ಪ್ರಾಣಿ ಮತ್ತು ಮಾನವ ಮೂತ್ರಗಳಲ್ಲಿ ಇರುತ್ತದೆ. ಪ್ರಾಣಿವರ್ಗಗಳಲ್ಲಿ ಬೆನ್‍ಜೀನ್ ಬಹಳ ಭಾಗ ಫಿನಾಲಾಗಿ ಪರಿವರ್ತನೆ ಹೊಂದಿ ಮೂತ್ರದಿಂದ ಹೊರಬೀಳುತ್ತದೆ. ಸೋಡಿಯಮ್ ಹೈಡ್ರಾಕ್ಸೈಡ್, ಗಂಧಕಾಮ್ಲ ಇವುಗಳ ಗುಂಪಿಗೆ ಸೇರಿದ ಫಿನಾಲ್ ಅತ್ಯಂತ ಮುಖ್ಯವಾದ ಸಂಯುಕ್ತ. ಇದನ್ನು ಭಾರ ರಾಸಾಯನಿಕ ಎನ್ನುವರು. ಚರ್ಮವನ್ನು ಹದಮಾಡುವುದಕ್ಕೆ ಬೇಕಾಗುವ ಕೃತಕ ಟ್ಯಾನಿನುಗಳನ್ನು,  ಬೇಕಲೈಟ್ ಎಂಬ ಫಿನಾಲ್-ಪಾರ್ಮಾಲ್ಡಿಹೈಡ್ ಪ್ಲಾಸ್ಟಿಕುಗಳನ್ನು ತಯಾರಿಸಲು ಇದನ್ನು ಉಪಯೋಗಿಸುವರು. 2-10% ಫಿನಾಲ್ ದ್ರಾವಣವನ್ನು ದಹ್ಯಶೀಲ ವಸ್ತುವಾಗಿ ಸುಡುವುದಕ್ಕೆ ಉಪಯೋಗಿಸುವರು. ಇದರಿಂದ ನರಹುಲಿ ಅಥವಾ ಚರ್ಮದ ಮೇಲಿನ ಗಂತಿಯನ್ನು ತೆಗೆದುಹಾಕಬಹುದು. ಫಿನಾಲಿನ ಸಾರರಿಕ್ತ ದ್ರಾವಣಗಳನ್ನು ಪೂತಿನಾಶಕ ಕ್ರಿಮಿನಾಶಕ ಮತ್ತು ಸೋಂಕು ನಿವಾರಕಗಳಾಗಿ ಬಳಸುವರು. ಫಿನಾಲಿನ ಸಾರರಿಕ್ತ ದ್ರಾವಣವನ್ನು ಉಪಯೋಗಿಸುವುದರಿಂದ ಶಸ್ತ್ರಚಿಕಿತ್ಸೆಯ ಅನಂತರ ವಿಷಾಣುಗಳಿಂದ ಉಂಟಾಗುವ ಊತಕಗಳ ಕೊಳೆಯುವಿಕೆಯನ್ನು ತಪ್ಪಿಸಬಹುದೆಂದು 1865ರಲ್ಲಿ ಲಿಸ್ಟರ್ ಎಂಬಾತ ತೋರಿಸಿಕೊಟ್ಟ. ವರ್ಣದ್ರವ್ಯಗಳ ತಯಾರಿಕೆಯಲ್ಲಿ ಸಹ ಇದನ್ನು ಉಪಯೋಗಿಸುವರು. ಪ್ರೋಟೊಜೋವನ್ ಕಾಯಿಲೆಯಾದ ಸಿಫಿಲಿಸನ್ನು ನಿವಾರಿಸಲು ಉಪಯೋಗಿಸುವ ಸಾಲ್‍ವರ್‍ಸಾನ್ ಅಥವಾ 606 ಎಂಬುದರ ತಯಾರಿಕೆಯಲ್ಲಿಯೂ ಸ್ಯಾಲಿಸಿಲಿಕ್ ಆಮ್ಲದ ತಯಾರಿಕೆಯಲ್ಲಿಯೂ ಇದರ ಉಪಯೋಗ ಉಂಟು.
(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ